ಧರ್ಮದ ನೈಜ ತಿಳುವಳಿಕೆ ಮತ್ತು ಅದರ ಪ್ರಾಮಾಣಿಕ ಅನುಷ್ಠಾನವು ಶಾಂತಿಯುತ ಸಮಾಜದ ಬೆಳವಣಿಗೆಗೆ ಅನಿವಾರ್ಯವಾಗಿದೆ. ಧರ್ಮವು ಬೋಧಿಸುವ ನೈತಿಕ ಮೌಲ್ಯಗಳು ಸಮಾಜದಲ್ಲಿ ಬೆಳೆದು ಬಂದರೆ ಮಾತ್ರ ರಾಷ್ಟ್ರದಲ್ಲಿ ಶಾಶ್ವತ ಶಾಂತಿ, ನೆಮ್ಮದಿ ನೆಲೆಸಬಲ್ಲುದು. ಆದರೆ ಇದಕ್ಕೆ ಧರ್ಮದ ನೈಜ ತಿಳುವಳಿಕೆಯ ಅಗತ್ಯವಿದೆ.
ಇಸ್ಲಾಮ್ ಧರ್ಮವು ಸಂಪೂರ್ಣ ಮಾನವ ಕುಲದ ಸರ್ವತೋಮುಖ ಏಳಿಗೆಗೆ ಪೂರಕವಾದ ಉದಾತ್ತ ಮೌಲ್ಯಗಳನ್ನು ಹೊಂದಿದೆ. ಅದು ಕೇವಲ ಕೆಲವು ನಂಬಿಕೆ, ಸಂಪ್ರದಾಯ ಅಥವಾ ಆರಾಧನಾ ವಿಧಿಗಳಿಗೆ ಸೀಮಿತವಾದ ಧರ್ಮವಲ್ಲ. ಮಾನವ ಜೀವನದ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಇತ್ಯಾದಿ ಎಲ್ಲ ರಂಗಗಳಿಗೂ ಅನ್ವಯವಾಗುವ ಮಾರ್ಗದರ್ಶನವನ್ನು ಅದು ನೀಡುತ್ತದೆ.
ಧಾರ್ಮಿಕ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಾಹಿತ್ಯಗಳು ತಮ್ಮದೇ ಪಾತ್ರವನ್ನು ನಿರ್ವಹಿಸುತ್ತವೆ. ಇಸ್ಲಾಮೀ ಸಾಹಿತ್ಯಗಳು ಕನ್ನಡದಲ್ಲಿ ತೀರಾ ಅಪರಿಚಿತವಾಗಿದ್ದ ಕಾಲವೊಂದಿತ್ತು. ಈ ಕೊರತೆಯನ್ನು ನೀಗಿಸಲು 1988ರಲ್ಲಿ ‘ಶಾಂತಿ ಪ್ರಕಾಶನ’ ಸಂಸ್ಥೆಯನ್ನು ಆರಂಭಿಸಲಾಯಿತು. ಕನ್ನಡಿಗರಾದ ಮುಸ್ಲಿಮರಿಗೆ ಧಾರ್ಮಿಕ ಶಿಕ್ಷಣ ಪಡೆಯುವ ಅನುಕೂಲತೆ ಒದಗಿಸುವುದರ ಜತೆಗೆ ಸಕಲ ಕನ್ನಡಿಗರಿಗೆ ಇಸ್ಲಾಮಿನ ಚಿರಂತನ ಮೌಲ್ಯಗಳನ್ನು ಪರಿಚಯಿಸಿ, ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಇರುವ ತಪ್ಪುಕಲ್ಪನೆ, ಅಪನಂಬಿಕೆ, ಪೂರ್ವಾಗ್ರಹಗಳನ್ನು ನಿವಾರಿಸುವ ಕೃತಿಗಳನ್ನು ಪ್ರಕಟಿಸಿ ಪ್ರಚಾರಪಡಿಸುವುದೇ ಶಾಂತಿ ಪ್ರಕಾಶನದ ಸದುದ್ದೇಶವಾಗಿದೆ. ಕೇವಲ ಅರಬಿ, ಉರ್ದು, ಇಂಗ್ಲಿಷ್ ಭಾಷೆಗಳಿಗೆ ಸೀಮಿತವಾಗಿದ್ದ ಇಸ್ಲಾಮೀ ಸಾಹಿತ್ಯಗಳನ್ನು ನಾಡ ಭಾಷೆ ಕನ್ನಡದಲ್ಲಿ ಪ್ರಕಟಿಸಿ, ಕನ್ನಡಿಗರ ಮಧ್ಯೆ ಸೌಹಾರ್ದದ ಬೆಸುಗೆಯನ್ನು ಅದು ಬೆಸೆದಿದೆ.
1988ರಲ್ಲಿ ಒಂದು ಪುಟ್ಟ ಸಂಸ್ಥೆಯಾಗಿ ರೂಪ ತಳೆದು ಇಂದು ಸುಮಾರು 300 ಕೃತಿಗಳನ್ನು ಪ್ರಕಾಶಿಸಿ ವಾಚಕರ ಕೈಗಿತ್ತ ಶಾಂತಿ ಪ್ರಕಾಶನ, ತನ್ನ ಈ ದಣಿವರಿಯದ ದುಡಿಮೆಯಿಂದ ಓದುಗ ವೃಂದದಲ್ಲಿ ಅಪಾರ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಇಸ್ಲಾಮಿನ ಬಾಲಪಾಠದಿಂದ ತೊಡಗಿ ವಿದ್ಯಾವಂತರೂ ಬುದ್ಧಿಜೀವಿಗಳೂ ಆದವರಿಗೆ ಇಸ್ಲಾಮಿನ ಸಂದೇಶವನ್ನು ತಿಳಿಯಪಡಿಸುವಂತಹ ಕೃತಿಗಳನ್ನು ಸಂಸ್ಥೆಯು ಪ್ರಕಟಿಸಿದೆ. ಕೇವಲ ಅರಬಿ ಭಾಷಾ ಜ್ಞಾನದಿಂದಲೇ ಗ್ರಹಿಸಬೇಕಾಗಿದ್ದ ಇಸ್ಲಾಮಿನ ಮೂಲ ಗ್ರಂಥವಾಗಿರುವ ಪವಿತ್ರ ಕುರ್ಆನಿನ ಕನ್ನಡ ಅನುವಾದ ಮತ್ತು ವ್ಯಾಖ್ಯಾನ ಗ್ರಂಥಗಳು ಕನ್ನಡ ಜನಕೋಟಿಗೆ ‘ಶಾಂತಿ ಪ್ರಕಾಶ’ನದ ಅಮೂಲ್ಯ ಕೊಡುಗೆಗಳಾಗಿವೆ.
ಇಸ್ಲಾಮ್ ಧರ್ಮದ ಬಗ್ಗೆ ವ್ಯಾಪಕ ತಪ್ಪು ಕಲ್ಪನೆ, ಅಪನಂಬಿಕೆಗಳು ಹರಡುತ್ತಿರುವ ಪ್ರಸಕ್ತ ದಿನಗಳಲ್ಲಿ ಇಸ್ಲಾಮಿನ ನೈಜ ಚಿತ್ರಣ ಮತ್ತು ವಾಸ್ತವಗಳನ್ನು ತಿಳಿ ಹೇಳುವ ನೂರಾರು ಪುಸ್ತಕಗಳನ್ನು ‘ಶಾಂತಿ ಪ್ರಕಾಶ’ನ ಪ್ರಕಟಿಸಿದೆ. ಮಾತ್ರವಲ್ಲ ಇತಿಹಾಸ, ವ್ಯಕ್ತಿತ್ವ ವಿಕಸನ, ಸಂತೃಪ್ತ ಕುಟುಂಬ ಜೀವನ, ಮಹಿಳೆ, ಮಕ್ಕಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಉಪಯುಕ್ತ ಪುಸ್ತಕಗಳನ್ನು 'ಶಾಂತಿ ಪ್ರಕಾಶನ' ಹೊರ ತಂದಿದೆ.
‘ಶಾಂತಿ ಪ್ರಕಾಶನ’ವು ತನ್ನ ಪುಸ್ತಕಗಳ ಪ್ರಚಾರಕ್ಕಾಗಿ ರಾಜ್ಯದಾದ್ಯಂತ ಪುಸ್ತಕ ಮೇಳಗಳನ್ನು ಹಮ್ಮಿಕೊಳ್ಳುತ್ತಿದೆ. ‘ಶಾಂತಿ ಸಾಹಿತ್ಯ ವಾಹಿನಿ’ ಎಂಬ ಸಂಚಾರಿ ಪುಸ್ತಕಾಲಯವು ರಾಜ್ಯದಾದ್ಯಂತ ಸಂಚರಿಸುತ್ತಿದೆ. ಈ ಮೂಲಕ ಸಂಸ್ಥೆಯ ಪರಿಚಯವು ಕೇವಲ ಸಾಹಿತ್ಯಿಕ ಮತ್ತು ಬುದ್ಧಿಜೀವಿಗಳ ವಲಯಗಳಲ್ಲಿ ಮಾತ್ರವಲ್ಲದೆ, ಜನಸಾಮಾನ್ಯರಿಗೂ ಬಹಳ ಪರಿಣಾಮಕಾರಿಯಾಗಿ ತಲುಪುತ್ತಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ, ಸಾಹಿತ್ಯ-ಸಂವಾದಗಳನ್ನು ಹಮ್ಮಿಕೊಂಡು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಮಾನವೀಯ ಮೌಲ್ಯಗಳ ಉತ್ಥಾನ ಮತ್ತು ಸಾಮರಸ್ಯಕ್ಕಾಗಿ ಶಾಂತಿ ಪ್ರಕಾಶನವು ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ಇಂದಿನ ಸೌಹಾರ್ದತೆಯ ಶಿಥಿಲಾವಸ್ಥೆಯಲ್ಲಿ ಧರ್ಮವೊಂದರ ನೈಜ ತಿರುಳನ್ನು ಮುಕ್ತವಾಗಿ ಸಾದರಪಡಿಸಿ ಕೋಮು ಸೌಹಾರ್ದಕ್ಕೆ ಬಲ ನೀಡಿದೆ. ಜತೆಗೇ ಕನ್ನಡವನ್ನು ಶ್ರೀಮದ್ ಸಮೃದ್ಧಗೊಳಿಸಿದೆ.
‘ಶಾಂತಿ ಪ್ರಕಾಶ’ನವು ಒಂದು ವ್ಯಾಪಾರಿ ಸಂಸ್ಥೆಯಲ್ಲ. ಧಾರ್ಮಿಕ ಮೌಲ್ಯಗಳ ಪ್ರಚಾರದಿಂದ ಮಾನವ ಸಮಾಜದಲ್ಲಿ ಶಾಂತಿ, ಸಹೋದರತೆ, ಸಮಾನತೆ, ಪರಸ್ಪರ ನಂಬಿಕೆ, ಸತ್ಯ, ನ್ಯಾಯ, ನೈತಿಕತೆ ನೆಲೆಸಿ ಜನತೆಯ, ಸಮಾಜದ ಮತ್ತು ರಾಷ್ಟ್ರದ ಸರ್ವತೋಮುಖ ಕಲ್ಯಾಣವಾಗಬೇಕೆಂಬ ಪ್ರಾಮಾಣಿಕ ಕಳಕಳಿಯೇ ‘ಶಾಂತಿ ಪ್ರಕಾಶನ’ದ ಚಾಲಕ ಶಕ್ತಿಯಾಗಿದೆ.
